ಮೈಸೂರು : ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ನಟ ದರ್ಶನ್ ಅವರು 6 ತಿಂಗಳ ಬಳಿಕ ಮೈಸೂರಿಗೆ ಆಗಮಿಸಿ, ತಮ್ಮ ಫಾರಂ ಹೌಸ್ ನಲ್ಲಿ ವಿಶ್ರಾಂತಿ ಮೊರೆ ಹೋಗಿದ್ದಾರೆ.
ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಯಾದ ದರ್ಶನ್ ಕಳೆದ ಜೂ.10ರಂದು ಮೈಸೂರಿನಲ್ಲೇ ಬಂಧನವಾಗಿದ್ದರು. ಜಾಮೀನು ಸಿಕ್ಕರೂ ಬೆಂಗಳೂರು ಬಿಟ್ಟು ತೆರಳದಂತೆ ನ್ಯಾಯಾಲಯವು ಆದೇಶಿಸಿತ್ತು. ಮೈಸೂರಿಗೆ ತೆರಳಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅವರ ಮನವಿ ಪುರಸ್ಕರಿಸಿದ್ದ ಬೆಂಗಳೂರಿನ ಸಿಸಿಎಚ್ 57ನೇ ಸೆಷನ್ಸ್ ನ್ಯಾಯಾಲಯವು ಜ.5ರವರೆಗೆ ಮೈಸೂರಿಗೆ ತೆರಳಲು ಅವಕಾಶ ನೀಡಿತ್ತು. ಈ ಹಿನ್ನೆಲೆ ಶುಕ್ರವಾರ ಮೈಸೂರು- ಟಿ. ನರಸೀಪುರ ಮುಖ್ಯ ರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರಂ ಹೌಸ್‌ಗೆ ಅಕ್ಕನ ಮಗ ಚಂದನ್ ಜತೆ ಆಗಮಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ದರ್ಶನ್ ಅವರೊಂದಿಗೆ ತಾಯಿ ಮೀನಾ ತೂಗುದೀಪ, ಪತ್ನಿ ವಿಜಯಲಕ್ಷ್ಮಿ, ನಟ ಧನ್ವಿರ್, ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಜೊತೆಗಿದ್ದರು. ಮೈಸೂರಿಗೆ ಆಗಮಿಸಿರುವ ದರ್ಶನ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ತೋಟದ ಸುತ್ತಲೂ ಆಳೆತ್ತರದ ಕಾಂಪೌಂಡ್ ಇದ್ದು, ಗೇಟ್‌ನಿಂದ ಹೊರಗಿನವರು ಸೇರಿದಂತೆ ಮಾಧ್ಯಮದವರು ಯಾವುದೇ ವಿಡಿಯೊ ಚಿತ್ರೀಕರಣ ಮಾಡದಂತೆ ತೋಟದ ಸಿಬ್ಬಂದಿ ಗೇಟ್ ಸುತ್ತ ಟಾರ್ಪಾಲ್ ಮುಚ್ಚಿದ್ದಾರೆ. ಎರಡು ವಾರ ಮೈಸೂರಲ್ಲಿರಲು ಅನುಮತಿ ಸಿಕ್ಕಿದ್ದರಿಂದ ಮೈಸೂರಿನ ಕುವೆಂಪು ನಗರದಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವ ಸಾಧ್ಯತೆ ಇದೆ.
More Stories
ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ಆಪರೇಷನ್ ಸಕ್ಸಸ್
ರೇಣುಕಾಸ್ವಾಮಿ ಕೊಲೆ ಕೇಸ್: ನಟ ದರ್ಶನ್ ಸೇರಿ ೭ ಆರೋಪಿಗಳಿಗೆ ಬೇಲ್