ಬೆಂಗಳೂರು: ನನ್ನ ರಾಜಕೀಯ ಜೀವನದಲ್ಲಿ ಆತ್ಮಸಾಕ್ಷಿಗೆ ವಿರುದ್ಧವಾಗಿ ಎಂದಿಗೂ ನಡೆದುಕೊಂಡಿಲ್ಲ ಎಂದು ಬಿಜೆಪಿ ನಾಯಕ ಸಿ ಟಿ ರವಿ ಸಮರ್ಥಿಸಿಕೊಂಡರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಪದ ಬಳಕೆಯ ಆರೋಪ ಎದುರಿಸುತ್ತಿರುವ ಸಿ.ಟಿ ರವಿ ಅವರು ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಾನು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ ಕುರಿತು ಯಾವುದೇ ದಾಖಲೆ ಇಲ್ಲ ಎಂದು ಸ್ವತಃ ಸಭಾಪತಿ ಅವರೇ ಹೇಳಿದ್ದಾರೆ. ಆದರೆ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ನನ್ನನ್ನು ನಡೆಸಿಕೊಂಡ ರೀತಿ ಮಾತ್ರ ಯಾವ ಶತ್ರುವಿಗೂ ಬೇಡ ಎಂದು ಹೇಳಿದರು.
ಬೆಳಗಾವಿಯಲ್ಲಿ ಪೊಲೀಸರು ನನ್ನೊಂದಿಗೆ ವತಿಸಿದ ರೀತಿಯನ್ನು ಯಾವ ಶಬ್ಧಗಳಲ್ಲಿ ಹೇಳಬೇಕು ಎಂಬುದು ತಿಳಿಯುತ್ತಿಲ್ಲ. ಬಂಧನದ ಬಳಿಕ ನನ್ನನ್ನು ರಾತ್ರಿಯಿಡೀ ಸುತ್ತಾಡಿಸಿದ್ದು ನೆನೆಸಿಕೊಂಡರೆ ಭಯವಾಗುತ್ತದೆ. ಯಾವ ಸಮಯದಲ್ಲಿ ಏನಾಗುತ್ತೋ ಎಂಬ ಆತಂಕದಲ್ಲಿದ್ದೆ ಎಂದು ಸಿ.ಟಿ ರವಿ ಘಟನೆ ವಿವರಿಸಿದರು.
ನಾನು ಕಳೆದ ಎರಡು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನಾನೆಂದೂ ಯಾರನ್ನೂ ನೋಯಿಸುವ ರಾಜಕಾರಣ ಮಾಡಿಲ್ಲ. ಆದರೆ ಪ್ರಸಕ್ತ ಕಾಂಗ್ರೆಸ್ ಸರ್ಕಾರ ನನ್ನ ವಿರುದ್ಧ ಸುಳ್ಳು ಆರೋಪಗಳಡಿ ಬಂಧಿಸಿ ಕಿರುಕುಳ ನೀಡಿದೆ. ಸ್ಪೀಕರ್ ಅನುಮತಿಯಿಲ್ಲದೇ ಪ್ರಕರಣ ದಾಖಲಿಸಿ ನನ್ನನ್ನು ಬಂಧಿಸಿದ್ದು ನಿಯಮಗಳಿಗೆ ಮಾಡಿದ ಅವಮಾನ ಎಂದು ಸಿ.ಟಿ ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಿ.ಟಿ ರವಿ ಅವರು ಸುದ್ದಿಗೋಷ್ಠಿಯುದ್ದಕ್ಕೂ ತಮ್ಮ ಸಮರ್ಥನೆ ಮಾಡಿಕೊಂಡಿದ್ದು, ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿರುವುದರ ಹಿಂದೆ ದೊಡ್ಡ ಪಿತೂರಿ ಅಡಗಿದೆ ಎಂದು ಗಂಭೀರ ಆರೋಪ ಮಾಡಿದರು.
More Stories
ಸಿಟಿ ರವಿ ವಿರುದ್ಧ ಕಾನೂನು ಹೋರಾಟ: ಲಕ್ಷ್ಮಿ ಹೆಬ್ಬಾಳಕರ
ಅಂಬೇಡ್ಕರ್ ವಿರೋಧಿ ಹೇಳಿಕೆ ಖಂಡಿಸಿ ಅಮಿತ್ ಶಾ ವಿರುದ್ಧ ಪ್ರತಿಭಟನೆ
ಹೆಬ್ಬಾಳಕರ ಆರೋಪ ಸುಳ್ಳು ಎಂದು ಬಿಜೆಪಿ ಪ್ರತಿಭಟನೆ